भारतीय भाषाओं द्वारा ज्ञान

Knowledge through Indian Languages

Dictionary

Kumbarike Vrutti Padakosha (Kannada-Kannada)(KASAPA)

Kannada Sahitya Parishattu (KASAPA)

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary

ಸೋಸು

(ಕ್ರಿ)
ಸೋಸುವುದು, ನಾಜೂಕಾದ ಪಾತ್ರೆ, ಗೊಂಬೆ, ಮೂರ್ತಿ ಇತ್ಯಾದಿಗಳನ್ನು ಮಾಡಲು ಜರಡಿಯಿಂದ ಮಣ್ಣನ್ನು ಸೋಸಿ ನಯವಾದ ಮಣ್ಣನ್ನು ತಯಾರಿಸುವರು.

ಹಂಚು

(ನಾ)
ಓಡು, ಛಾವಣಿಗೆ ಹೊದಿಸುವ ಹಂಚು, ಅಧಿಕ ಮಳೆ ಬೀಳುವ ಪ್ರದೇಶಗಳಲ್ಲಿ ಮತ್ತು ಮಲೆನಾಡಿನಲ್ಲಿ ಹಂಚಿನ ಬಳಕೆ ಹೆಚ್ಚು ಒಡೆದ ಮಡಿಕೆ ಚೂರಿಗೂ ಕೂಡ ಹಂಚು ಎನ್ನುವರು.
ಹಂಚಿನಲ್ಲಿ ನಾನಾ ವಿಧಿಗಳಿವೆ ಕೊರಡು ಹಂಚು, ಹರಿಹಂಚು, ದಂಬೆ ಹಂಚು, ಬೆಂಕ್ಚಿ ಹಂಚು ಇತ್ಯಾದಿ.
“ಹಂಚಿನಿದಿರಲಿ ಹಲ್ಲು ತೆರದರೆ ಮಿಂಚುಕನ್ನಡಿಯಾಗಬಲ್ಲುದೆ?” (ಪ್ರಸನ್ನವೆಂಕಟದಾಸರು)
ಹಂಚು ಕಾಣದವಳು ಕಂಚು ಕಂಡ್ರೆ ದಿನಕ್ಕೆ ಮೂರಾವರ್ತೆ ಬೆಳಗಿ ತಿಂದ್ಲು (ಗಾದೆ)
ಪರ್ಯಾಯ ಪದ : “ದಂಬೆ ಹಂಚು ಮಾಳಿಗೆ ಹಂಚು”

ಹಣತೆ

(ನಾ)
ನೋಡಿ – ಪಣತಿ.

ಹರವಿ

(ನಾ)
ಪರವಿ, ಹರಿವಿ, ಹರಿಬಿ, ಹರುಬಿ, ಹರುವಿ, ಕುಡಿಯುವ ನೀರನ್ನು ಹಾಕಿಡಲು ಬಳಸುವ ದೊಡ್ಡ ಗಡಿಗೆ, ನೀರನ ಪಡಗ, ಹಂಡೆ ತರಹ ಇರುವುದು.
“ದಂಡಿಗಂಜುವ ಭಂಟ ಒಡಕು ಹರವಿಯ ಕಂಠ” (ಕನಕದಾಸ)
ಹರವಿಯ ಅನ್ನದಲ್ಲಿ ಒಂದಗಳು ನೋಡಿದರೆ ಸಾಕು (ಗಾದೆ)
ಮುರುವಿಗೆ ಬಗೆ ಇಲ್ಲದಿದ್ರ ಹರವಿಗೂ ದರಿದ್ರವೆ (ಗಾದೆ)

ಹರವೀಡು

(ನಾ)
ದಪ್ಪ ಗಡಿಗೆ. ದಕ್ಷಿಣ ಕರ್ನಾಟಕದಲ್ಲಿ ಈ ಪದ ಹೆಚ್ಚಾಗಿ ಬಳಕೆಯಲ್ಲಿದೆ.

ಹರಿಗಲ್ಲು

(ನಾ)
ದೊಡ್ಡ ಮಡಿಕೆಗಳನ್ನು ತಟ್ಟುವ ಕಲ್ಲು

ಹರಿನಾಳಿಗೆ

(ನಾ)
ಮಣ್ಣಿನ ಕೊಳವೆ, ಪೈಪು, ಮಳೆಗಾಲದಲ್ಲಿ ಮಾಳಿಗೆಯ ನೀರು ಹರಿದು ಹೋಗಲು ಕುಂಬಿಯಲ್ಲಿ ಹರಿನಾಳಿಗೆಯನ್ನು ಕೂಡ್ರಿಸುವರು. ಇವು ಸುಮಾರು ಒಂದು ಮೀಟರದಷ್ಟು ಉದ್ದ ಇರುತ್ತವೆ. ಜೋಡು ಹರಿನಾಳಗೆ ಕೂಡ ಇಡುವರು. ಹಳ್ಳಿಗಳಲ್ಲಿ ಮಳೆ ಬಿದ್ದ ಪ್ರಮಾಣವನ್ನು ಹೇಳುವಾಗ ‘ಮಳಿ ಹರಿ ನಾಳಿಗಿ ನೀರ ಬಿದ್ದಂಗ ಬಿತ್ತು’ – ಎನ್ನುವರು.
ಶಾನಬೋಗರ ಕುದುರೆ ನಿಂತು ನೀರು ಹೊಯ್ಯುತ್ತೆ (ಒಗಟು)

ಹರಿವಾಣ

(ನಾ)
ಅರಿವಾಣ, ಅಗಲವಾದ ತಟ್ಟೆ. ಪರಾತ
ಚಿನ್ನದ ಹರಿವಾಣವಾದರೂ ಮಣ್ಣಿನ ಗೋಡೆಗೆ ಒರಗಬೇಕು (ಗಾದೆ)

ಹಲ್ಲೆ

(ನಾ)
ಕುಂಬಾರಗಿತ್ತಿಯರು ಕೈಯಿಂದ ಮಡಕೆ ಮಾಡುವಾಗ ಮಣ್ಣನ್ನು ಸುರುಳಿ ಮಾಡಿ, ತುಂಡು ತುಂಡು ಮಾಡಿಕೊಂಡು, ಒಂದೊಂದೆ ತುಂಡನ್ನು ಜಜ್ಜುವಕಲ್ಲಿನಿಂದ ಜಜ್ಜಿ ಅಗಲ ಮಾಡುವರು, ಇದು ರೊಟ್ಟಿಯ ಹಾಗೆ ದುಂಡಗಿರುವದು ಇದನ್ನೇ ಹಲ್ಲೆ ಎನ್ನುವರು, ಮಾಡುವ ಮಡಕೆಯ ಗಾತ್ರಕ್ಕನುಗುಣವಾಗಿ ಸಣ್ಣ ದೊಡ್ಡ ಹಲ್ಲಿ ಮಾಡಿಕೊಳ್ಳುವರು, ಅದನ್ನೇ ತೆಗೆದು ಅಟ್ಟಿಗೆ ಹಾಕಿ ಕೈಯಿಂದ ತೀಡುವರು.

ಹವೆ ಗೂಡು

(ನಾ)
ಆವಿಗೆಯಲ್ಲಿ ಮಡಕೆಗಳನ್ನಿಟ್ಟು ಸುಡುವಾಗ ಒಳಗಿನ ಹಬೆ ಹೊರಕ್ಕೆ ಹೋಗುವಂತೆ ಆವಿಗೆಯ ಮಧ್ಯದಲ್ಲಿ ಬಿಟ್ಟ ಚಿಕ್ಕ ಕಿಂಡಿ.

ಹಳಕು

(ನಾ)
ಹಳಕ, ಆವಿಗೆಯನ್ನು ಬೂದಿಯಿಂದ ಮುಚ್ಚಿ ಆವಿಗೆ ಕಾಯುಸುತ್ತಿರುವಾಗ ಬೂದಿಯಲ್ಲಿ ಬೀಳುವ ತೂತುಗಳು, ಪುನಃ ಅವುಗಳನ್ನು ಬೂದಿಯಿಂದ ಮುಚ್ಚುವರು.

ಹಳಗ

(ನಾ)
ಹಳಗೆ, ನೀರು ಕಾಯಿಸುವ ಗಡಿಗೆ

ಹಾಂಡ

(ನಾ)
ಕುಂಬಾರ, ಕುಲಾಲ, ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ಕುಂಬಾರರು ತಮ್ಮ ಹೆಸರಿನ ಮುಂದೆ ಹಾಂಡ ಎಂದು ಹಚ್ಚಿಕೊಳ್ಳುವರು “ಹಂಡೆ” ಪದದಿಂದ ಹಾಂಡ ಬಂದಿರಬೇಕು.

ಹ್ಯಾಂಗಿಂಗ್ ಪಾಟ್

(ನಾ)
ಇದು ಇಂಗ್ಲಿಷ್ ಶಬ್ದ. ಕನ್ನಡ ಪದ ಎನ್ನುವಷ್ಟರ ಮಟ್ಟಿಗೆ ದಕ್ಷಿಣ ಕರ್ನಾಟಕದಲ್ಲಿ ಬಳಕೆಯಲ್ಲಿದೆ. ಇದರ ಕಂಠಕ್ಕೆ ಮೂರು ಕಡೆ ರಂಧ್ರ ಮಾಡಿ ಹಗ್ಗ ಅಥವಾ ತಂತಿಯಿಂದ ತಕ್ಕಡಿ ರೀತಿ ಕಟ್ಟಿ ಮಣ್ಣನ್ನು ತುಂಬಿ ಅಲಂಕೃತ ಸಸ್ಯ ಬೆಳೆಸಿ ಮನೆಮುಂದುಗಡೆ ತೂಗುಹಾಕುವರು.

ಹಾರುಹೊಡಿ

(ಕ್ರಿ)
1. ಆವಿಗೆಯನ್ನು ತೆಗೆದು ಮಡಕೆಗಳು ಆರಲೆಂದು ಬಿಡುವುದು.
2. ಮಡಕೆಗಳು ಕೆಂಪುಬಣ್ಣ ಪಡೆಯಲೆಂದು ಆವಿಗೆ ಹಿಂದೆ ಇಟ್ಟ ಕಿಂಡಿಗಳನ್ನು ತೆರೆದಿಡುವರು.

ಹಾಲರವಿ

(ನಾ)
ಹಾಲರವಿ, ಹಾಲು ತುಂಬಿದ ಹರವಿ, ಗ್ರಾಮ ದೇವತೆಯ ಹಬ್ಬದಲ್ಲಿ ಕುಂಬಾರರ ಮನೆಯಿಂದ ಒಯ್ಯುವರು.

ಹಾಸಗಲ್ಲು

(ನಾ)
ಆಡಿಗಲ್ಲು. ಹೆಂಗಸರು ಮಣ್ಣಿನ ಕೆಲಸ ಮಾಡುವಾಗ ಉಪಯೋಗಿಸುವ ದುಂಡಗಿನ ಚಪ್ಪಟೆಯಾದ ಕಲ್ಲು. ಸಾಮಾನ್ಯವಾಗಿ 30 ಸೆಂ.ಮೀ. ವ್ಯಾಸವುಳ್ಳದ್ದು ನೆಲ್ಲದಲ್ಲಿಯೆ ಶಾಶ್ವತವಾಗಿ ಕೂರಿಸಿರುತ್ತಾರೆ. ಹಾಸುಗಲ್ಲಿನ ಮೇಲೆ ಮಣ್ಣಿನ ಉರುಳೆಗಳನಿಟ್ಟು ಜಜ್ಜುವ ಕಲ್ಲಿನಿಂದ ಉರುಳೆಯನ್ನು ಜಜ್ಜಿ ಚಪ್ಪಟೆ ಮಾಡಿ ಅಚ್ಚಿಗೆ ಹಾಕುವರು.

ಹಿಡಕಿ

(ನಾ)
ಹಿಡಿಕೆ, ಮಣ್ಣಿನ ವಿವಿಧ ಮಡಿಕೆಗಳನ್ನು ಕೈಯಲ್ಲಿ ಹಿಡಿಯಲು ಅನುಕೂಲವಾಗುವಂತೆ ಮಣ್ಣಿನ ಹಿಡಿಕೆಗಳನ್ನು ಪ್ರತ್ಯೇಕವಾಗಿ ತಯಾರಿಸಿ, ಹೂಜಿ ತತ್ರಾಣಿ, ಜಗ್ಗು ಇತ್ಯಾದಿ ಮಣ್ಣಿನ ವಸ್ತುಗಳಿಗೆ ಅವು ಅರೆ ಹಸಿ ಇರುವಾಗಲೆ ಅಂಟಿಸುವರು.

ಹಿರೆಕೊಪ್ಪರಿಗೆ

(ನಾ)
ಮಣ್ಣಿನ ದೊಡ್ಡ ಪಾತ್ರೆ, ಜಾತ್ರೆಗಳಲ್ಲಿ ಹುಗ್ಗಿ ಮಾಡಲು ಹಾಗೂ ನೀರು ತುಂಬಿಡಲು ಬಳಸುವರು ಬೆಳಗಾಂವ್ ಜಿಲ್ಲೆಯಲ್ಲಿ ಈ ಪದ ಬಳಕೆಯಲ್ಲಿದೆ.

ಹುಗ್ಗಿ ಗಡಿಗೆ

(ನಾ)
ಹುಗ್ಗಿ ಮಾಡಲು ಬಳಸುವ ಗಡಿಗೆ

Search Dictionaries

Loading Results

Follow Us :   
  Download Bharatavani App
  Bharatavani Windows App