भारतीय भाषाओं द्वारा ज्ञान

Knowledge through Indian Languages

Dictionary

Kumbarike Vrutti Padakosha (Kannada-Kannada)(KASAPA)

Kannada Sahitya Parishattu (KASAPA)

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary

ತಸ್ತಿ

(ನಾ)
ಪಚೇಲಿ, ನೀರು ಕಾಯಿಸುವ ಗಡಿಗೆ, ಇದರಬಾಯಿ ಅಗಲವಿದ್ದು ತಳದಪ್ಪವಿರುತ್ತದೆ. ನೋಡಿ – ಪಚೇಲಿ

ತಿಗುರಿ

(ನಾ)
ತಿಹುರಿ, ತಿಗರಿ, ತಿರುಗುಣಿ ಕುಂಬಾರನ ಚಕ್ರ, ಕುಂಬಾರನ ಗಾಲಿ ಕುಂಬಾರಿಕೆಯ ಸಾಧನ ಸಲಕರಣೆಗಳಲ್ಲಿ ತಿಗುರಿ ಮುಖ್ಯ. ತಿಗರಿಯ ಹಣೆ ಮತ್ತು ಕೈಗಳನ್ನು ಕಟ್ಟಿಗೆಯಿಂದ ಮಾಡಿಸಿ, ತಮಗೆ ಬೇಕಾದ ಅಳತೆಗೆ ಕುಂಬಾರರು ಮಣ್ಣಿನಿಂದ ತಿಗರಿಯನ್ನು ಮಾಡಿಕೊಳ್ಳುವರು. ಉತ್ತರ ಪ್ರದೇಶ್, ಬಿಹಾರ್, ರಾಜಾಸ್ಥಾನ, ಪಂಜಾಬದ ಕೆಲಭಾಗಗಳಲ್ಲಿ ಕಲ್ಲಿನ ಚಕ್ರದ ಬಳಕೆ ಕೂಡ ಇದೆ. ಪ್ರಾಚ್ಯ ವಿದ್ವಾಂಸರ ಪ್ರಕಾರ ವಿಶ್ವಕ್ಕೆ ಮೊದಲು ತಿಗುರಿಯನ್ನು ಪರಿಚಯಿಸಿದವರು ಸುಮೇರಿಯನ್-ರು. ಈಜಿಪ್ಟಿಯನ್ನರು ತಮ್ಮ ಜನಾಂಗದ ಆರಾಧ್ಯದೇವರಾದ ಶನುಮ್-ನು ತಿಗರಿಯನ್ನು ಕುಂಬಾರನಿಗೆ ಕೊಟ್ಟನೆಂದು ನಂಬುವರು.
‘ದಂಡಭ್ರಹ್ಮಂ ಕುಲಾಲ ಚಕ್ರದೋಳ್’ (ಅಗ್ಗಳದೇವ)
‘ತಿರುಗತದ ತಿಗರಿ
ಹರವಿ, ಗಡಗಿ ಮಡಕಿ ಹಡೀತದ
ಕುಂಬಾರನ ತಿಗುರಿ’ (ಬೇಂದ್ರೆ)

ತಿಗುರಿ ಕಣ್ಣು

(ನಾ)
ತಿಗುರಿಯ ಹಣೆಯಲ್ಲಿ ಕೂಡಿಸಲಾದ ಬೆಣಚುಕಲ್ಲಿನಲ್ಲಿ ಗೋಲಾಕಾರವಾಗಿ ಮಾಡಲಾದ ತಗ್ಗು ಗುಬ್ಬಕಲ್ಲು ನೋಡಿ.

ತಿಗುರಿ ಗುಳಿ

(ನಾ)
ತಿಗುರಿಯ ಸುತ್ತಿನಲ್ಲಿ ಮಾಡಿರುವ ಒಂದು ಒಂದುವರೆ ಸೆ. ಮೀ. ಅಗಲದ ಒಂದು ಸೆ.ಮಿ. ಆಳದ ಗುಳಿ ಅದರಲ್ಲಿ ಕೋಲನ್ನು ಇಟ್ಟು ತಿರುಗಿಸಿ ತಿಗುರಿಯನ್ನು ಚಾಲು ಮಾಡುವರು.

ತಿಗುರಿ ಕೋಲು

(ನಾ)
ಕುಂಬಾರಗೋಲು, ತಿಗರಿ ಬಡಿಗೆ, ತಿಗುರಿಯನ್ನು ತಿರುಗಿಸಲು ಬಳಸುವ ಬಿದರಿನ ಕೋಲು. ಇದು ಸುಮಾರು ಒಂದುವರೆಯಿಂದ ಎರಡು ಮೀಟರ್ ಉದ್ದವಿರುವುದು.
‘ಪಂದಿ ತಿರುಗುವ ಪದದೊಳ್ ಕೇ ಲಂ ಮಾಡುವ ತಿಗುರಿಯ ಕೋಲಂತೆ’ (ಮಲ್ಲಿಕಾರ್ಜುನ)

ತಿಗುರಿ ಗೂಟ

(ನಾ)
ಶೂಲ, ತಿಗರಿ ತಿರುಗಿಸಲು, ನೆಲದಲ್ಲಿ ಹುಗಿದ ಕಟ್ಟಗೆಯ ಗೂಟ. ಇದನ್ನು ಕಟ್ಟಿಗೆಯಿಂದ ಮಾಡಿದ್ದು, ಇದರ ತುದಿ ಭಾಗದಲ್ಲಿ ಮೊನಚಾಗಿದ್ದು, ತಳ ಭಾಗದಲ್ಲಿ ದಪ್ಪಾಗಿ ಇರುವುದು. ಇದು ಸುಮಾರು ಒಂದು ಮೀಟರ್ ಉದ್ದವಾಗಿದ್ದು, 45 ಸೆಂ.ಮೀ.ನಷ್ಟು ನೆಲದ ಮೇಲ್ಗಡೆ ಇರುವಂತೆ ನೆಲದಲ್ಲಿ ತಗ್ಗುತೆಗೆದು ಭಧ್ರಪಡಿಸುವರು, ತಿಗರಿ ಹಾಕುವಾಗ ಗೂಟದ ಮೊನಚಾದ ತುದಿಯನ್ನು ತಿಗರಿ ಕಲ್ಲಿನಲ್ಲಿ ಇಟ್ಟು ತಿಗರಿ ತಿರುಗಿಸುವರು.

ತಿಗುರಿ ತಗಡು

(ನಾ)
ತಿಗುರಿಯ ಹಣೆಯ ಪೀಠದ ಮೇಲೆ ಅರಲನ್ನು ಬಡಿದು, ಅದನ್ನು ದುಂಡಗೆ ಮಾಡಲು ಆಚೆ ಈಚೆ ಅರಲನ್ನು ಸವಲ ತೆಗೆಯಲು ಬಳಸುವ ತಗಡಿನ ತುಂಡು.

ತಿಗುರಿ ಹಣೆ

(ನಾ)
ತಿಗರಿಯ ಮಧ್ಯಭಾಗದಲ್ಲಿ ಗೋಲಾಕಾರವಾಗಿರುವ ಕಟ್ಟಿಗೆಯ ಪೀಠ. ಇದರ ಮೇಲೆ ಹದ ಮಾಡಿದ ಮಣ್ಣನ್ನು (ಅರಲನ್ನು) ಬಡಿದು ಮಡಕೆಗಳನ್ನು ಮಾಡುವರು.

ತಿಗುರಿ ಹೂಡು

(ಕ್ರಿ)
ತಿಗುರಿಯನ್ನು ಗೂಟಕ್ಕೆ ಹಾಕಿ ಅದನ್ನು ತಿರುಗಿಸಲು ಆರಂಭಿಸುವುದು.

ತೀಡು

(ಕ್ರಿ)
ಕೈಯಿಂದ ಮಡಕೆಗಳನ್ನು ಮಾಡುವ ಕ್ರಿಯೆ, ಹದಮಾಡಿದ ಅರಲನ್ನು ಸುರುಳಿ ಮಾಡಿ, ಜಜ್ಜುವ ಕಲ್ಲಿನಿಂದ ಜಜ್ಜಿ ನಂತರ ಅಚ್ಚಿನಲ್ಲಿಟ್ಟು ಒಂದು ಅರಿವೆ ಪಕಡಿಯಿಂದ ತಯಾರಿಸಬೇಕಾದ ಪಾತ್ರೆ ಸಿದ್ಧವಾಗುವವರಿಗೆ ತೀಡುವ ಕ್ರಿಯೆಗೆ ತೀಡುವುದು ಎನ್ನುವರು. ಹೀಗೆ ತೀಡಿದ ಪಾತ್ರೆಗೆ ಬೋಸಿ ಎನ್ನುವರು. ಇದಕ್ಕೆ ಕಂಠ ಇರುವುದಿಲ್ಲ. ಸಾಮಾನ್ಯವಾಗಿ ಕುಂಬಾರಗಿತ್ತಿಯರು ಚಿಕ್ಕ, ಚಿಕ್ಕ ಮಣ್ಣಿನ ಪಾತ್ರೆಗಳನ್ನು ಕೈಯಿಂದ ತೀಡಿ ಸಿದ್ಧಗೊಳಿಸುವರು.

ತುಳಿ

(ಕ್ರಿ)
ಸ್ವಚ್ಛ ಮಾಡಿದ ಮಣ್ಣಿಗೆ ನೀರನ್ನು ಹಾಕಿ ಕೆಲ ಘಂಟೆಗಳವರೆಗೆ ನೆನೆಯಲು ಬಿಟ್ಟು ಅದು ನೆನೆದ ಮೇಲೆ ಅದನ್ನು ಕಾಲಿನಿಂದ ತುಳಿದು ಹದ ಮಾಡಿ ಒಂದೆಡೆ ಒಟ್ಟುವರು.

ತೆರೆ ಎತ್ತು

(ಕ್ರಿ)
ತಿಗುರಿಯ ಹಣೆಗೆ ಹಾಕಿದ ಮಣ್ಣನ್ನು ಮಡಿಕೆ ಮಾಡಲು ಮೇಲೆತ್ತುವ ಕ್ರಿಯೆ.

ತೆರೆಬಡಿ

(ಕ್ರಿ)
ತಿಗುರಿಯ ಹಣೆಯ ಮೇಲೆ ಅರಲನ್ನು ಒಟ್ಟುವುದು. ತಿಗುರಿಯನ್ನು ಹೂಡಿದ ಮೇಲೆ ಅದನ್ನು ನಿಧಾನಕ್ಕೆ ಕೈಯಿಂದ ತಿರುಗಿಸುತ್ತ, ಹಿಡಿ, ಹಿಡಿ, ಅರಲನ್ನು ತೆಗೆದುಕೊಂಡು ಅದರ ಹಣೆಯ ಮೇಲೆ ಬಡಿದು ಅರಲನ್ನು ಒಟ್ಟುವ ಕ್ರಿಯೆಗೆ ತೆರೆ ಬಡೆಯುವುದು ಎನ್ನುವರು.

ತೋಯಿಸಿದ ಅರಿವೆ ಕೊರಡು

(ನಾ)
ಹಸಿಬಟ್ಟೆಯುಳ್ಳ ಮರದ ಹಲಗೆ, ಸೊಳದಿಂದ ಮಡಕೆ ತಟ್ಟುವಾಗ ಆಗಾಗ್ಗೆ ಸೊಳವನ್ನು ಹಸಿಮಾಡಿಕೊಳ್ಳಲು ಪಕ್ಕದಲ್ಲಿ ಇಟ್ಟುಕೊಳ್ಳುವ ಹಸಿಬಟ್ಟೆಯುಳ್ಳ ಮರದ ಹಲಗೆ. ಇದು ಸುಮಾರು 15 ಸೆಂ.ಮೀ. ದಪ್ಪವಿರುತ್ತದೆ. ಉದ್ದ 10 ಸೆಂ. ಮೀ. ಅಗಲ 8 ಸೆಂ. ಮೀ. ದಪ್ಪವಿರುತ್ತದೆ. ಅದರ ಮೇಲೆ ಎರಡು ಮೂರು ಮಡಿಕೆ ಮಾಡಿ ತೋಯಿಸಿದ ಬಟ್ಟೆಯನ್ನು ಇಟ್ಟಿರುತ್ತಾರೆ.

ಥಾಲಿ

(ನಾ)
ಗಿಂಡಿ, ಸಣ್ಣ ಮಕ್ಕಳು ನೀರು ಕುಡಿಯಲು ಬಳಸುವ ಚಿಕ್ಕ ಪಾತ್ರೆ. ಹಾಲು ಮೊಸರು ಹಾಕಿ ಇಡಲು ಉಪಯೋಗಿಸುವರು.

ದದ್ದು

(ನಾ)
ಗಡಿಗೆಯಲ್ಲಿ ಸಣ್ಣಗೆ ಬಿಡುವ ಬಿರುಕು
‘ಕೃಷ್ಣ ದದ್ದು ಮಡಿಕೆಯಲ್ಲಿ ಮೋಟುಮರಕ್ಕೆ ನೀರ್ಹೊತ್ತ ರೀತಿ” (ಕಾ.ತ.ಚಿಕ್ಕಣ್ಣ)

ದಬ್ಬಿಗಡಿಗೆ

(ನಾ)
ರೊಕ್ಕದ ಗಡಿಗೆ, ಹುಂಡಿ ಗಡಿಗೆ, ಬಾಯಿ ಮುಚ್ಚಿಮಾಡಿದ ಗಡಿಗೆ ಅದರ ನೆತ್ತಿಯ ಮೇಲೆ ನಾಣ್ಯ ಹೋಗುವಷ್ಟು ರಂಧ್ರ ಮಾಡಲಾಗಿರುವುದು. ಮನೆಯಲ್ಲಿ ಮಕ್ಕಳು ಮತ್ತು ಹೆಂಗಸರು ದುಡ್ಡನ್ನು ಉಳಿತಾಯ ಮಾಡಲು ದಬ್ಬಿಗಡಿಗೆಯಲ್ಲಿ ಹಾಕುವರು. ಅದು ಪೂರ್ತಿ ತುಂಬಿದ ಮೇಲೆ ಇಲ್ಲವೆ ಹಣದ ಅವಶ್ಯಕತೆ ಬಿದ್ದಾಗ ಅದನ್ನು ಒಡೆಯುವರು.

ದರಗ

(ನಾ)
ಗಂಡಸರು ಹಸಿ ಮಡಕೆಗಳನ್ನು ತಟ್ಟುವ ಸ್ಥಳ, ಕೆಳಗಡೆ ಗೋಣಿತಟ್ಟು ಹಾಕಿಕೊಂಡು, ತಟ್ಟಲು ಅನುಕೂಲವಾಗುವ ಹಾಗೆ ಮಾಡಿಕೊಳ್ಳುವರು.

ಧಾರಾಕುಡಿಕೆ

(ನಾ)
ನಳಿಕೆ – ಜೋಡಿಸಿದ ಮಡಿಕೆ, ಐರಾಣಿಗಡಿಗೆಗಳಲ್ಲಿ ಕೊಡುವ ಮಡಕೆಗಳಲ್ಲಿ ಇದೂ ಒಂದು. ಮದುವೆ ಸಮಾರಂಭಗಳಲ್ಲಿ ಇದರಲ್ಲಿ ಹಾಲನ್ನು ಹಾಕಿಕೊಂಡು ಎರೆಯಲು ಉಪಯೋಗಿಸುವರು. ಇದು ದಕ್ಷಿಣ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದಲ್ಲಿ ಬಳಕೆಯಲ್ಲಿದೆ.

ಧಾರಾಪಾತ್ರೆ

(ನಾ)
ಚಿಕ್ಕ ಗಡಿಗೆ, ಈಶ್ವರ ಲಿಂಗಕ್ಕೆ ಜಲಾಭಿಷೇಕ ಮಾಡಲು ಇದನ್ನು ಬಳಸುವರು. ಈ ಮಡಿಕೆಯಲ್ಲಿ ನೀರು ತುಂಬಿ ಈಶ್ವರ ಲಿಂಗದ ಮೇಲೆ ಸ್ವಲ್ಪ ಅಂತರದಲ್ಲಿ ತೂಗುಬಿಡುವರು. ಮಡಿಕೆಯ ತಳದಲ್ಲಿ ಒಂದು ಚಿಕ್ಕ ರಂಧ್ರಮಾಡಿರುವುದರಿಂದ ನೀರು ಲಿಂಗದ ಮೇಲೆ ಧಾರೆಯಾಗಿ ನಿರಂತರ ಬೀಳುವುದು.

Search Dictionaries

Loading Results

Follow Us :   
  Download Bharatavani App
  Bharatavani Windows App